ಅಮರನಾಥ ಗುಹೆ
	
ಕೇದಾರನಾಥ, ಬದರೀನಾಥ, ಕೈಲಾಸಗಳಂತೆ ಪ್ರಸಿದ್ಧವಾಗಿರುವ ಅಮರನಾಥ ಕ್ಷೇತ್ರದಲ್ಲಿ ಬಹು ಪವಿತ್ರವೆನಿಸಿರುವ ಪ್ರಾಕೃತಿಕ ಗುಹೆ, ಶಿವದೇವಾಲಯ. ಅಮರನಾಥ ಜಮ್ಮು ಮತ್ತು ಕಾಶ್ಮೀರದ ಪರ್ವತ ಪ್ರದೇಶದಲ್ಲಿದೆ. ಶ್ರೀನಗರದಿಂದ ಚಂದನವಾಡಿ, ಶೇಷನಾಗ ಮತ್ತು ಪಂಚತರಣಿಗಳನ್ನು ದಾಟಿ ಐದು ಮೈಲಿ ನಡೆದರೆ ಅಮರನಾಥ ಸಿಗುತ್ತದೆ. ಕೊನೆಯ ಐದು ಮೈಲಿ ದಾರಿಯಲ್ಲಿ ಒಂದೂವರೆ ಮೈಲಿ ಎತ್ತರದ ಬೆಟ್ಟವನ್ನು ಹತ್ತಿ ಇಳಿಯಬೇಕಾಗುವುದು. ಅನಂತರ ಹಿಮದಿಂದ ಆವರಿಸಿರುವ ಕಣಿವೆಯ ಒಳಗೆ ಸುಮಾರು ಎರಡು ಮೈಲಿಗಳ ದೂರ ನಡೆದರೆ ಕ್ಷೇತ್ರ ಸನ್ನಿಹಿತವಾಗುತ್ತದೆ. ಹಿಮದ ಕಣಿವೆಯಲ್ಲಿ ಹಾದುಹೋಗುವಾಗ ಒಂದು ಪಕ್ಕದಲ್ಲಿ ಬೆಟ್ಟದ ಮಧ್ಯೆ ಸು. 1300' ಎತ್ತರದಲ್ಲಿ ಕಾಣುವುದೇ ಅಮರನಾಥ ಗುಹೆ. ಗುಹೆ 55' ಅಗಲ, 50' ಎತ್ತರವಾಗಿದೆ; ಈ ಆಯಕಟ್ಟಿನೊಳಗೆ ಸುಮಾರು 50' ಉದ್ದವಿದೆ. ಗುಹೆಯ ಹೊರಭಾಗದ ಒಂದು ಪಕ್ಕದಲ್ಲಿ ಹರಿಯುತ್ತಿರುವ ಅಮರಗಂಗೆ ಎಂಬ ಸಣ್ಣ ಹಿಮಝರಿಯಾತ್ರಾರ್ಥಿಗಳ ಸ್ನಾನಪಾನಾದಿಗಳಿಗೆ ಪವಿತ್ರವೆನಿಸಿದೆ. ಗುಹೆಯ ಒಂದು ಮೂಲೆಯಲ್ಲಿ ದೊಡ್ಡ ಹಿಮರಾಶಿ ಶಿವಲಿಂಗಾಕಾರದಲ್ಲಿ ಕಾಣಿಸುವುದು. ಇದನ್ನು ಅಮರನಾಥಶಿವ ಎಂದು ಕರೆಯುತ್ತಾರೆ. ಈ ದೇವಾಲಯ ಅಲ್ಲಿನ ದೇವನಂತೆ ಕೇವಲ ಪ್ರಾಕೃತಿಕ, ಮಾನವನಿರ್ಮಿತವಲ್ಲ. ಪ್ರಕೃತಿಯ ನಗ್ನೀಕರಣಕಾರಕಗಳಾದ ಮಳೆಗಾಳಿ ಬಿಸಿಲುಗಳು ಈ ಪವಾಡವನ್ನೆಸಗಿವೆ. ಇಲ್ಲಿ ಪ್ರಕೃತಿಯೇ ದೇವ, ದೇಗುಲ. ಯಾತ್ರಾರ್ಥಿಗಳೇ ಪೂಜಾರಿಗಳು. ಈ ವಿಶೇಷಗುಣದಿಂದಾಗಿ ಅಮರನಾಥ ಗುಹೆ ಬಹುಮುಖ್ಯ ಯಾತ್ರಾಸ್ಥಳಗಳಲ್ಲೊಂದಾಗಿದೆ.		
(ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ